ದೇವಲ
	ಬ್ರಹ್ಮರ್ಷಿ, ಅಷ್ಟವಸುಗಳಲ್ಲಿ ಒಬ್ಬನಾದ ಪ್ರತ್ಯೂಷನ ಮಗ. ಕಶ್ಯಪ ಮುನಿಯ ಗೋತ್ರದವ. ಮಹಾe್ಞÁನಿಯಾದ ಈತನನ್ನು ಅಸಿತ, ಅಸಿತದೇವಲ ಎಂದೂ ಕರೆಯುತ್ತಾರೆ. ಈತ ಜನಮೇಜಯನ ಸರ್ಪಯಾಗದಲ್ಲಿ ಒಬ್ಬ ಸದಸ್ಯನಾಗಿದ್ದುದಲ್ಲದೆ ದೇವಲೋಕದಲ್ಲಿ ಪಿತೃದೇವತೆಗಳಿಗೆ ಮಹಾಭಾರತದ ಕಥೆಯನ್ನು ವಿವರಿಸಿದನೆಂದು ತಿಳಿದುಬರುತ್ತದೆ. ಪಾಂಡವರ ಪುರೋಹಿತ ಧೌಮ್ಯ ಈತನ ಸಹೋದರ. ಈತ ಜೈಗೀಷ ಮಹರ್ಷಿಯ ಯೋಗ ಪ್ರಭಾವವನ್ನು ಕಂಡು ಆಶ್ಚರ್ಯಪಟ್ಟು ಅದನ್ನು ತಾನೂ ಸಾಧಿಸಿಕೊಳ್ಳಬೇಕೆಂದು ಪ್ರಯತ್ನಪಟ್ಟ. ಪ್ರಾಣಿಗಳ ಹುಟ್ಟು, ಸ್ಥಿತಿ, ಲಯಗಳ ಬಗ್ಗೆ ನಾರದನೊಂದಿಗೆ ಈತ ಚರ್ಚಿಸಿದುದನ್ನು ಮಹಾಭಾರತದ ಶಾಂತಿಪರ್ವದಲ್ಲಿ ನೋಡಬಹುದು. ಈತ ಹೂಹೂ ಎಂಬ ಗಂಧರ್ವನಿಗೆ ಮೊಸಳೆಯಾಗೆಂದು ಶಾಪವಿತ್ತ.
ಮರೀಚಿ ಋಷಿಯ ಮಕ್ಕಳಾದ ಸ್ಮರ, ಉದ್ಗೀಥ, ಪರಿಷ್ವಂಗ, ಪತಂಗ, ಕ್ಷುದ್ರಭೃತ್, ಘೃಣಿ ಎಂಬ ಆರು ಮಂದಿ ಮಕ್ಕಳು ಕೃಶವಾದ ಈತನ ದೇಹವನ್ನು ಕಂಡು ನಕ್ಕಾಗ ಆ ಕುಮಾರರಿಗೆ ದೈತ್ಯರಾಗಿ ಜನಿಸುವಂತೆ ಈತ ಶಾಪವಿತ್ತ. ಮುಂದೆ ಅವರೇ ಕಾಲನೇಮಿಯ ಮಕ್ಕಳಾಗಿ ಜನಿಸಿದರು. ಈ ವಿಚಾರ ಮಹಾಭಾರತ ಭಾಗವತಗಳಲ್ಲಿದೆ.

	ಭಗವದ್ಗೀತೆಯಲ್ಲಿ ಬ್ರಹ್ಮe್ಞÁನಿಗಳ ವಿಷಯವನ್ನು ಹೇಳುವಾಗ ನಾರದನಿಗೆ ಸಮಾನವಾಗಿ ಇವನನ್ನು ಪ್ರಶಂಸಿಸಲಾಗಿದೆ.
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ